ಫೇರೋ - 
ಪ್ರಾಚೀನ ಈಜಿಪ್ಟ್ ರಾಜವರ್ಗದ ಹೆಸರು. ಈಜಿಪ್ಟಿನ ದೊರೆ. ಹಲವಾರು ಸ್ಥಳೀಯ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶವನ್ನು ಮೊತ್ತಮೊದಲಿಗೆ ಒಂದೇ ಆಡಳತಕ್ಕೆ ಒಳಪಡಿಸಿದಾತ ಮೆನಸ್ (ಕ್ರಿ.ಪೂ. ಸು. 3400) ಎಂದು ಹೇಳಲಾಗಿದೆ. ಮೆಂಫಿಸ್ ಇವನ ರಾಜಧಾನಿ. ಆ ಕಾಲಕ್ಕೆ ಈಗಿನ ಪ್ಯಾಲಸ್ಟೀನ್ ಫಿನೀಷಿಯ ಮತ್ತು ಸಿರಿಯ ಈಜಿಪ್ಟಿನ ಅಧೀನದಲ್ಲಿದ್ದುವು. ಮೆನಸ್ ಪ್ಯಾರೋಗಳ ವಂಶದ ಮೂಲ ಪುರುಷ. ಈತ ನಿರಂಕುಶ ಅಧಿಕಾರಿ. ಆತನ ಸಹಾಯಕ್ಕಿದ್ದ ಅಧಿಕಾರಿಗಳ ಹೊರತು ಉಳಿದ ಪ್ರಜೆಗಳು ಅವನ ಆಜ್ಞಾನುವರ್ತಿಗಳಾಗಿದ್ದರು. ಅವನ ಅನಂತರ ಬಂದ ಅನೇಕ ದೊರೆಗಳು ಬಲಿಷ್ಠರಾಗಿದ್ದರು. ನಾಗರಿಕತೆ ಆ ಕಾಲದಲ್ಲಿ ಬೆಳೆಯಿತು. ಚಿತ್ರಲಿಪಿ ವಿಕಾಸಗೊಂಡಿತು. ಪಿರಮಿಡ್ಡುಗಳು ನಿರ್ಮಾಣವಾದವು. ಖೂಫೂ (ಕ್ರಿ.ಪೂ. 2900 ?) ದೊಡ್ಡ ಪಿರಮಿಡ್ಡುಗಳನ್ನು ಕಟ್ಟಿಸಿದ. ಇವನು ನಾಲ್ಕನೆಯ ರಾಜವಂಶದ ಮೊದಲಿಗ. ಈ ವಂಶದ ಇನ್ನೊಬ್ಬ ಪ್ರಮುಖ ಫ್ಯಾರೋಖಾಫ್ರೆ (ಕ್ರಿ.ಪೂ. ಸು 2869 ?).

	1ನೆಯ ಅಮ್ಯಾಸಿಸ್ (ಮರಣ ಕ್ರಿ.ಪೂ. ಸು 1557) 18ನೆಯ ರಾಜವಂಶದ ಮೊದಲಿಗ. ಈಜಿಪ್ಟಿನ ಮೇಲೆ ಆಕ್ರಮಣ ನಡೆಸುತ್ತಿದ್ದ ಹಿಕ್ಸೋಸರನ್ನು ಹೊಡೆದೋಡಿಸಿ ರಾಜ್ಯವನ್ನು ಬಲಪಡಿಸಿದ. 1ನೆಯ ಅಮೆನ್‍ಹೂಟೆಪ್ (ಕ್ರಿ.ಪೂ. 1557) ಇವನ ಮಗ. ಈಜಿಪ್ಟ್ ರಾಜ್ಯದ ವಿಸ್ತಾರಕ್ಕೂ ಆಡಳಿತಕ್ಕೂ ಶ್ರಮಿಸಿದ. ಇವನ ಮಗ 1ನೆಯ ಥಟ್‍ಮೋಸ್ ಹೊಸ ರಾಜ್ಯವನ್ನು ಇನ್ನಷ್ಟು ಬಲಪಡಿಸಿದ. ಸಿರಿಯವನ್ನು ಆಕ್ರಮಿಸಿದ. ವಿಸ್ತಾರಗೊಂಡ ರಾಜ್ಯಕ್ಕೆ ತನ್ನ ಮಗಳು ಹ್ಯಾಟ್ಷೆಪ್ಸಟಳನ್ನು ಉತ್ತರಾಧಿಕಾರಿಣಿಯಾಗಿ ನೇಮಿಸಿದ. ಇವಳು ಗಂಡಸಿನಂತೆಯೇ ರಾಜ್ಯವಾಳಿದಳು. ಹಿಕ್ಸೋಸರು ಹಾಳುಮಾಡಿದ್ದ ದೇವಾಲಯಗಳನ್ನೂ ಕಟ್ಟಡಗಳನ್ನೂ ಪುನರುದ್ಧಾರಮಾಡಿ, ವ್ಯಾಪಾರವನ್ನು ಹೆಚ್ಚಿಸಿ, ಒಳಾಡಳಿತದಲ್ಲಿ ತಕ್ಕ ಮೇಲ್ವಿಚಾರಣೆಯನ್ನಿಟ್ಟುಕೊಂಡು ಉತ್ತಮ ಆಡಳಿತಗಾರಳೆನಿಸಿಕೊಂಡಳು (ಮರಣ ಕ್ರಿ.ಪೂ. ಸು 1481). ಈಕೆಯ ಆಡಳಿತದ ನೆನಪಾಗಿ ಒಬೆಲಸ್ಕ್ ಎಂಬ ಎತ್ತರದ ಶಿಲಾಸ್ತಂಭವೊಂದು ಈಗಲೂ ಉಳಿದಿದೆ.

	ಅವಳ ಅನಂತರ 3ನೆಯ ಥಟ್‍ಮೋಸ್ ಆಡಳಿತಕ್ಕೆ ಬಂದು ದಂಡಯಾತ್ರೆಗಳ ಮೂಲಕ ದೇಶವನ್ನು ವಿಸ್ತರಿಸಿದ. ಸಮುದ್ರಾಧಿಕಾರವನ್ನು ಇಟ್ಟುಕೊಳ್ಳಲು ನೌಕಾಸೈನ್ಯವೊಂದನ್ನು ನಿರ್ಮಿಸಿದ. ಆತನನ್ನು ಈಜಿಪ್ಟಿನ ನೆಪೋಲಿಯನ್ ಎಂದು ಕರೆಯುತ್ತಾರೆ. ಸ್ವತಂತ್ರಗೊಂಡಿದ್ದ ಸಿರಿಯಾ, ಫಿನೀಷಿಯ ಮತ್ತು ಪ್ಯಾಲಸ್ಟೀನ್ ಪ್ರದೇಶಗಳು ಮತ್ತೆ ಆತನ ಅಧೀನವಾದುವು. ಅವನ ಅನಂತರ 2ನೆಯ ಅಮೆನ್‍ಹೂಟೆಪ್ ಪಟ್ಟಕ್ಕೆ ಬಂದ (ಕ್ರಿ.ಪೂ. 1448). ಆತನ ಕಾಲದಲ್ಲಿ ಕಲೆ ಮತ್ತು ವ್ಯಾಪಾರ ಬೆಳೆದವು.

	4ನೆಯ ಅಮೆನ್‍ಹೂಟೆಪ್ (ಕ್ರಿ.ಪೂ. ಸು. 1411) ಮತ್ತೊಬ್ಬ ಪ್ರಸಿದ್ಧ ದೊರೆ. ಇವನದು ವೈಭವದ ಮತ್ತು ನೆಮ್ಮದಿಯ ಕಾಲವಾಗಿತ್ತು. ಇವನು ಸೈನ್ಯದ ಕಡೆ ಹೆಚ್ಚಾಗಿ ಗಮನ ಕೊಡಲಿಲ್ಲ. ಅದರಿಂದಾಗಿ ಅನೇಕ ಪ್ರಾಂತ್ಯಗಳು ಕೈಬಿಟ್ಟುಹೋದವು.

	3ನೆಯ ರಾಯ್ಸೀಸ್ ಈಜಿಪ್ಟಿನ ಕಟ್ಟಕಡೆಯ ಸಮರ್ಥ ಫೇರೋ. ಇವನು 20ನೆಯ ರಾಜವಂಶಕ್ಕೆ ಸೇರಿದವನು. ಇವನ ಅನಂತರ ಈಜಿಪ್ಟಿನ ಪ್ರಾಬಲ್ಯ ಕುಗ್ಗತೊಡಗಿತು. ಲಿಬ್ಯನರೂ, ಗ್ರೀಕರೂ ಈಜಿಪ್ಟಿನ ಮೇಲೆ ದಾಳಿಮಾಡಿದರು. ಕ್ರಿ. ಪೂ 525ರಲ್ಲಿ ಈಜಿಪ್ಟ್ ಪರ್ಷಿಯನ್ನರ ಆಳ್ವಿಕೆಗೆ ಒಳಗಾಯಿತು.

	ಫೇರೋಗಳು ಸಾರ್ವಭೌಮಾಧಿಕಾರ ಹೊಂದಿದ್ದರು. ಸರ್ವಶ್ರೇಷ್ಠ ನ್ಯಾಯಧೀಶ, ಪ್ರಮುಖ ಸೇನಾಧಿಪತಿ, ಕಾನೂನಿನ ನಿರ್ಮಾಣ, ನಿರ್ವಹಣೆ, ನ್ಯಾಯಪಾಲನೆ, ಮುಖ್ಯ ಪೌರೋಹಿತ್ಯ ಎಲ್ಲವೂ ಇವರಲ್ಲಿ ಕೇಂದ್ರೀಕರಿಸಿದ್ದುವು. ಈಜಿಪ್ಟಿನ ಜನತೆ ಫೇರೋಗಳನ್ನು ದೈವಾಂಶಸಂಭೂತರೆಂದು ಪರಿಗಣಿಸಿದ್ದರು.	
(ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ